ರವಿಷೇಣ
ಸು. 638. ಪ್ರಸಿದ್ಧ ಸಂಸ್ಕøತ ಜೈನಕವಿ. ಪದ್ಮಪುರಾಣ ಎಂಬ ಕಾವ್ಯದ ಕರ್ತೃ. ಪದ್ಮಪುರಾಣ ರಾಮಾಯಣದ ಕಥೆಗೆ ಸಂಬಂಧಿಸಿದಂತೆ ದೊರೆತಿರುವ ಅತ್ಯಂತ ಪ್ರಾಚೀನ ಜೈನಪುರಾಣ. ಇದರಲ್ಲಿ 1639 ಶ್ಲೋಕಗಳೂ 123 ಪರ್ವಗಳೂ ಇವೆ. ಜೈನ ರಾಮಾಯಣದ ಪರಂಪರೆಯಲ್ಲಿ ವಿಮಲಸೂರಿಯ ಸಂಪ್ರದಾಯ, ಸಂಘದಾಸ ಮತ್ತು ಹರಿಷೇಣರ ಸಂಪ್ರದಾಯ, ಗುಣಭದ್ರ ಸಂಪ್ರದಾಯ ಎಂಬ ಮೂರು ಪ್ರಮುಖ ಸಂಪ್ರದಾಯಗಳಿವೆ. ಪದ್ಮಪುರಾಣ ವಿಮಲಸೂರಿಯ ಸಂಪ್ರದಾಯದಲ್ಲಿ ಬಂದ ಒಂದು ಮುಖ್ಯ ಕೃತಿ. ರವಿಷೇಣನ ಕೃತಿಯಲ್ಲಿ ಕಾಣುವ ರಾಮಚರಿತೆ ಜಿನಸೇನ-ಗುಣಭದ್ರರ ಸಂಸ್ಕøತದ ಮಹಾಪುರಾಣದಲ್ಲಿ ಮತ್ತು ಹೇಮಚಂದ್ರನ ಸಂಸ್ಕøತದ ತ್ರಿಷಷ್ಠಿ ಶಲಾಕಾಪುರುಷ ಚರಿತೆಯಲ್ಲಿಯೂ ಕಂಡುಬಂದಿದೆ. ತನ್ನ ಕೃತಿಯ ಪರಂಪರೆಯನ್ನು ಕವಿ ಹೀಗೆ ಹೇಳಿಕೊಂಡಿದ್ದಾನೆ: 
		ವರ್ಧಮಾನ ಜಿನೇಂದ್ರೋಕ್ಷಃ ಸೊಯಮರ್ಥೋ ಗಣೇಶ್ವರಮ್
		ಇಂದ್ರಭೂತಿಂ ಪರಿಪ್ರಾಪ್ತಃ ಸುಧರ್ಮಧಾರಿಣೀಭವಮ್ (ಪದ್ಮಪುರಾಣ, 41)
		ಪ್ರಭವಂ ಕ್ರಮತಃ ಕೀರ್ತಿ ತತೋನುತ್ತರ ವಾಗ್ಮಿನಮ್
		ಲಿಖಿತಂ ತಸ್ಯ ಸಂಪ್ರಾಪ್ಯರವೇರ್ಯತ್ನೋಯಮುದ್ಗತಃ (ಪದ್ಮಪುರಾಣ,42)
ಜಿನಸೇನನ ಹರವಂಶಪುರಾಣದಲ್ಲಿ (ಸು. 830) ರವಿಷೇಣನನನ್ನು ಸ್ಮರಿಸಲಾಗಿದೆ. ಪದ್ಮಪುರಾಣಕ್ಕೆ ಪ್ರಾಕೃತದ ವಿಮಲಸೂರಿಯ ಪವುಮಚರಿಯ ಕೃತಿಯೇ ಆಕರ. ಪದ್ಮಪುರಾಣ ಅದರ ಪ್ರತಿಕೃತಿ ಎನ್ನುವಷ್ಟರಮಟ್ಟಿಗೆ ಈ ಎರಡೂ ಕೃತಿಗಳಲ್ಲಿ ಸಾಮ್ಯಗಳಿವೆ.

	ಪದ್ಮಪುರಾಣದ ಕಥನಾಯಕ ಎಂಟನೆಯ ಬಲಭದ್ರನಾದ ಪದ್ಮ (ರಾಮ). ಹಾಗೆಯೇ ಎಂಟನೆಯ ನಾರಾಯಣ ಲಕ್ಷ್ಮಣ. ಜೈನಪರಂಪರೆಯಲ್ಲಿ ರಾಮನನ್ನು ಶಲಾಕಾಪುರುಷರಲ್ಲಿ ವಾಸುದೇವನ ರೂಪದಲ್ಲಿ ಕೀರ್ತಿಸಲಾಗಿದೆ. ಜೈಪುರಾಣಗಳಲ್ಲಿ ರಾಮನನ್ನು ಪದ್ಮ ಎಂಬ ಹೆಸರಿನಿಂದಲೇ ನಿರ್ದೇಶಿಸಲಾಗಿದೆ. ಈ ಪದ್ಮಪುರಾಣವೇ ಕನ್ನಡದ ಪ್ರಸಿದ್ಧ ಕವಿ ನಾಗಚಂದ್ರನ ಪಂಪರಾಮಾಯಣಕ್ಕೆ ಪ್ರಮುಖ ಆಕರ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ